ಮೋದಿ ನೇತೃತ್ವದಲ್ಲಿ ಕರ್ನಾಟಕದಲ್ಲಿ ಎನ್‌ಡಿಎ ಮೈತ್ರಿಯ ಗೆಲುವು ಖಚಿತ: ಪಿ.ಸಿ.ಮೋಹನ್

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ 400 ಕ್ಷೇತ್ರಗಳಲ್ಲಿ ಎನ್‌ಡಿಎ ಗೆಲುವು ಸಾಧಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ವಿಶ್ವಾಸ ವ್ಯಕ್ತಪಡಿಸಿರುವ ಬೆನ್ನಲ್ಲೇ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಪಿ.ಸಿ. ಮೋಹನ್ ಕರ್ನಾಟಕದಲ್ಲಿಯೂ ಎನ್.ಡಿ.ಎ ಮೈತ್ರಿಕೂಟ ಭರ್ಜರಿ ಗೆಲುವು ದಾಖಲಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ನಾಲ್ಕನೇ ಬಾರಿಗೆ ಕಣಕ್ಕಿಳಿದಿರುವ ಅವರು, ಈ ಬಾರಿಯೂ ನಿಚ್ಚಳ ಬಹುಮತದೊಂದಿಗೆ ಪಾರ್ಲಿಮೆಂಟ್ ಪ್ರವೇಶಿಸುತ್ತೇನೆ ಎಂದಿದ್ದಾರೆ. ಅಲ್ಲದೇ ಕಾಂಗ್ರೆಸ್ ವೈಫಲ್ಯದ ವಿರುದ್ಧ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಮಾತ್ರವಲ್ಲದೆ ರಾಷ್ಟ್ರಾದ್ಯಂತ ಕಾಂಗ್ರೆಸ್ ಜನರ ವಿಶ್ವಾಸ ಕಳೆದುಕೊಂಡಿದೆ. ಆದರೆ ಮೋದಿ ಸರ್ಕಾರ, ಕಳೆದ ಎರಡು ಅವಧಿಯಲ್ಲಿ ವಿವಿಧ ಜನೋಪಯೋಗಿ ಕಾರ್ಯಗಳ ಮೂಲಕ ದೇಶದ ಜನರ ವಿಶ್ವಾಸ ಗಳಿಸಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕರ್ನಾಟಕದ ಎಲ್ಲ 28 ಸ್ಥಾನಗಳಲ್ಲೂ ಗೆಲುವು ಪಡೆಯಲು ನಾವು ಸಂಕಲ್ಪ ಮಾಡಿದ್ದೇವೆ. ಜೆಡಿಎಸ್ ಮೈತ್ರಿಕೂಟದ ಬೆಂಬಲದೊಂದಿಗೆ ಈ ಬಾರಿ ಕರ್ನಾಟಕದಲ್ಲಿಯೂ ಭರ್ಜರಿ ಗೆಲುವು ಸಾಧಿಸಲಿದ್ದೇವೆ.

ಪ್ರಧಾನಿ ಮೋದಿಯಂಥ ದೂರ ದೃಷ್ಟಿಯುಳ್ಳ ನಾಯಕರ ನೇತೃತ್ವದಲ್ಲಿ ದೇಶದ ಆರ್ಥಿಕತೆ ದೃಢವಾದ ಬೆಳವಣಿಗೆಯನ್ನು ಕಂಡಿದೆ. ಮೂರನೇ ಬಾರಿಗೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ರಚನೆಯಾಗುವ ಮೂಲಕ 2047ಕ್ಕೆ ಭಾರತ ಅಭಿವೃದ್ಧಿ ರಾಷ್ಟ್ರವಾಗಿ ಗುರುತಿಸಿಕೊಳ್ಳುವುದು ನಿಶ್ಚಿತ. ಈ ನಿಟ್ಟಿನಲ್ಲಿ ಕರ್ನಾಟಕದಿಂದಲೂ ಬಿಜೆಪಿ ಜೆಡಿಎಸ್ ಮೈತ್ರಿ ನಾಯಕರು ಸರ್ವ ರೀತಿಯಲ್ಲೂ ಶ್ರಮಿಸಲಿದ್ದೇವೆ ಎಂದು ಹೇಳಿದ್ದಾರೆ‌‌.

ಜತೆಗೆ ಕಳೆದ 15 ವರ್ಷಗಳಿಂದ ನಾನು ಬೆಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿಗೆ ದಣಿವರಿಯದೇ ಶ್ರಮಿಸಿದ್ದೇನೆ. ಬೆಂಗಳೂರಿಗೆ ಆಧುನಿಕ ಮತ್ತು ವಿಶ್ವ ದರ್ಜೆಯ ಸೌಕರ್ಯಗಳನ್ನು ಒದಗಿಸಲು ಕೆಲಸ ಮಾಡಿದ್ದೇನೆ. ಈ ಬಾರಿಯೂ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಜನರ ಅಶೋತ್ತರಗಳನ್ನು ಈಡೇರಿಸುವಲ್ಲಿ ಯಶಸ್ವಿಯಾಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.